ಸಂಗೀತ ವಾದ್ಯಗಳು
	ಮನಸ್ಸಿಗೆ ಆಹ್ಲಾದವನ್ನೂ ಹೃದಯಕ್ಕೆ  ಮುದವನ್ನೂ ಊಡುವ ಮಧುರಸ್ವನಗಳನ್ನು ಹೊಮ್ಮಿಸುವ ಸಾಧನಗಳು (ಮ್ಯೂಸಿಕಲ್ ಇನ್‍ಸ್ಟ್ರುಮೆಂಟ್ಸ್). ನಾಗರಿಕತೆಯ ಉಗಮ ದಿನಗಳಂದೇ (5000 ವರ್ಷಗಳಿಗಿಂತಲೂ ಹಿಂದೆ) ಬಳಕೆಗೆ ಬಂದವು. ಸ್ಥಳೀಯ ಪರಿಸರದಲ್ಲಿ ಸುಲಭವಾಗಿ ಸಿಗುತ್ತಿದ್ದ ಬಿದಿರು ಕಡ್ಡಿಗಳಿಂದ ತಯಾರಿಸಿದ ಪೀಪಿ (ಇದು ಕೊಳಲಿನ ಪೂರ್ವಜ) ಮತ್ತು ಚರ್ಮವಾದ್ಯ (ಇದು ಡೋಲು ಡಮರುಗಳು ಪೂರ್ವಜ). ಅಂದು ಹಾಡುಗಾರಿಕೆಯ ಆದಿಮ ದಿನಗಳು. ಕ್ರಮೇಣ ವಾದ್ಯಗಳು ಸಂಗೀತಾಭಿವ್ಯಕ್ತಿಗೆ ಸಹಾಯಕಗಳಾಗಿ ಅರಳಿದುವು - ಇವು 
ಪಕ್ಕ ವಾದ್ಯಗಳು. ಇನ್ನು ನೃತ್ಯವಂತೂ ಮಾನವನ ಜೊತೆಗೆ ಮೈದಳೆದು ಬೆಳೆದು ಬಂದಿರುವ ಇನ್ನೊಂದು ಕಲಾಪ್ರಕಾರ. ಹೀಗೆ ಸಂಗೀತ-ನೃತ್ಯ-ವಾದ್ಯಗಳ ಸಹಯೋಗ ಕೂಡ ಕ್ರಮೇಣ ನಾಗರಿಕತೆಯ ಅವಿಭಾಜ್ಯ ಅಂಗವಾಯಿತು. ಮುಂದೆ ಲೋಹ ಯುಗಕ್ಕೆ ಪ್ರವೇಶಿಸಿದಂತೆ (ಕ್ರಿ.ಪೂ.ಸು. 2000) ಲೋಹವಾದ್ಯಗಳೂ ಬಳಕೆಗೆ ಬಂದುದನ್ನು ಕಾಣುತ್ತೇವೆ. 

	ಭಾರತದಲ್ಲಿ ವೈದಿಕವಾಙ್ಮಯ ಮೈವಡೆದ ಯುಗದಲ್ಲೇ (ಕ್ರಿ.ಪೂ. ಸು. 1500) ನೃತ್ಯಕ್ಕೂ ಗೀತಕ್ಕೂ ಹೊಂದಿಕೊಂಡ ವಾದ್ಯಗಳಲ್ಲದೆ ಸ್ವತಂತ್ರ ವಾದನವಾದ್ಯಗಳ ಪ್ರಸ್ತಾಪವೂ ಇದೆ. ಅಂದು ವೇಣು, ವೀಣೆ ಮತ್ತು ವಾಣ ಸಾಕಷ್ಟು ಪ್ರಚಲಿತವಾಗಿದ್ದ ವಾದ್ಯಗಳೆಂಬ ಸೂಚನೆ ಉಂಟು. ಈ ಕಿರು ತೊರೆಗಳಲ್ಲಿ ಬೇರೆ ಬೇರೆ ಮೂಲಗಳಿಂದ ಹರಿದ ಸಂಗೀತ ಒರತೆಗಳು ಕ್ರಮೇಣ ಒಂದುಗೂಡಿ ನದಿಯಾಗಿ ಭಾರತೀಯ ಗಾನಕಲೆ ಸ್ವತಂತ್ರ ಶಾಸ್ತ್ರರೂಪಪಡೆದು ಅಭಿವರ್ಧಿಸಿತು. ಮುಂದೆ ಸಂಗೀತ ಮತ್ತು ನೃತ್ಯ ಪ್ರಕಾರಗಳ ಅಗತ್ಯಗಳಿಗನುಸಾರವಾಗಿ ವಿವಿಧ ವಾದ್ಯಗಳು ಬಳಕೆಗೆ ಬಂದುವು. ರಚನೆಯ ದೃಷ್ಟಿಯಿಂದ ಭಾರತೀಯ ಸಂಗೀತ ವಾದ್ಯಗಳನ್ನು ನಾಲ್ಕು ಬಗೆಗಳಾಗಿ ವಿಂಗಡಿಸಿದೆ : ತತ, ಸುಷಿರ, ಅವನದ್ಧ ಮತ್ತು ಘನ. 

	ತತ: ತಂತಿಯ ಪಾತ್ರವೇ ಪ್ರಧಾನವಾಗಿರುವ ವಾದ್ಯಗಳು. ಉದಾಹÀಣೆಗೆ ವೀಣೆ, ಪಿಟೀಲು, ಸಿತಾರ್, ಗೊಟ್ಟುವಾದ್ಯ, ಸಾರಂಗಿ, ದಿಲ್ರೂಬ, ಸ್ವರಮಂಡಲ ಮುಂತಾದವು. 

	ಸುಷಿರ: ವಾಯು ಸಂಚಾರವನ್ನು ನಿಯಂತ್ರಿಸಿ ನಾದೋತ್ಪಾದನೆ ಮಾಡುವ ವಾದ್ಯಗಳು. ಉದಾಹರಣೆಗೆ ಕೊಳಲು, ನಾಗಸ್ವರ, ಶಹನಾಯ್, ಮುಖವೀಣೆ, ಪುಂಗಿ, ಹಾರ್ಮೋನಿಯಮ್ ಮುಂತಾದವು. 

	ಅವನದ್ಧ: ಚರ್ಮದ ಪದರವನ್ನು ಹರವಿ ಬಿಗಿಕಟ್ಟಿ ಕರ್ಷಣಕ್ಕೆ (ಟೆನ್ಷನ್) ಒಳಪಡಿಸಿ ಕೈಯಿಂದ ಬಡಿದು ಅಥವಾ ಕಡ್ಡಿಗಳಿಂದ ಹೊಡೆದು ನಾದೋತ್ಪಾದನೆ ಮಾಡುವ ವಾದ್ಯಗಳು. ಉದಾಹರಣೆಗೆ ಡೋಲು, ಡಮರು, ನಗಾರಿ, ಮೃದಂಗ, ತಮಟೆ ಮುಂತಾದವು. 	ಘನ: ಲೋಹಗಳಿಂದಲೇ ತಯಾರಾದ ವಾದ್ಯಗಳು. ಉದಾಹರಣೆಗೆ ಗಂಟೆ, ಜಾಗಟೆ, ತಾಳ ಮುಂತಾದವು. ಅಂತೆಯೇ ಮಣ್ಣಿನಿಂದ ಮಾಡಿದ ಘಟವಾದ್ಯವೂ ಈ ಗುಂಪಿಗೆ ಸೇರುತ್ತದೆ. 

	ಮೇಲೆ ನೀಡಿರುವ ವಾದ್ಯನಿದರ್ಶನಗಳ ಪೈಕಿ ಪಿಟೀಲು ಮತ್ತು ಹಾರ್ಮೋನಿಯಮ್ ವಿದೇಶೀ ಮೂಲದವು. ಆದರೆ ಇವು ಭಾರತೀಯ ವಾದ್ಯಗಳ ಜೊತೆ ಬಲು ಸುಲಭವಾಗಿ ಹೊಂದಿಕೊಂಡಿವೆ. ಇದರ ಅರ್ಥ ವಾದ್ಯವಲ್ಲ, ಅದರ ಹಿಂದೆ ಇರುವ ಮಾನವನ ಕಲಾಪ್ರಪೂರ್ಣ ಮತಿ. ವಾದ್ಯವನ್ನು ತಯಾರಿಸುವಾಗ ಸ್ವರ ಮತ್ತು ಲಯ ಎರಡರ ಕಡೆಗೂ ಗಮನಹರಿಸಬೇಕು. ಸ್ವರಗಳ ಉತ್ಪಾದನೆಗೆ, ವಿಕಾಸಕ್ಕೆ, ಪ್ರಸ್ತಾರಕ್ಕೆ, ಉತ್ಕರ್ಷೆಗೆ, ಸಂಚಾರದ ವೈಶಿಷ್ಟ್ಯಕ್ಕೆ ವೀಣೆ, ಪಿಟೀಲು ಮುಂತಾದ ಪ್ರಧಾನ ವಾದ್ಯಗಳು ನೆರವಾಗುತ್ತವೆ. ಲಯ ಗಣನೆಗೆಂದು ಮೃದಂಗ, ಘಟ, ತವಿಲ್, ಖಂಜರಿ ಮುಂತಾದ ತಾಳವಾದ್ಯಗಳನ್ನು ಉಪಯೋಗಿಸು ತ್ತಾರೆ. ಒಂದೊಂದು ಸಾರಿ ಬರಿಯ ತಾಳವಾದ್ಯಗಳನ್ನೇ ನುಡಿಸುವುದುಂಟು. `ತಾಳವಾದ್ಯ ಕಛೇರಿ ಎಂದು ಇಂಥ ಕೂಟದ ಹೆಸರು. ಸಂಗೀತದ ಗತಿ ಅವ್ಯಾಹತವಾಗಿ ಮುಂದುವರಿಯಲು ಸ್ವರ ಸ್ಥಾನಗಳಿಗೆ ಆಧಾರ ಒದಗಿಸಬೇಕಾಗುತ್ತದೆ. ಇದಕ್ಕಾಗಿ ತಂಬೂರ, ಏಕತಾರ, ಮೋರಿ ಮುಂತಾದ ಶ್ರುತಿವಾದ್ಯಗಳನ್ನು ಏರ್ಪಡಿಸಿದ್ದಾರೆ. ಗಾಯನಕ್ಕೆ ಇದು ಅನಿವಾರ್ಯ. ಇದಲ್ಲದೆ ಸ್ವರನಿಷ್ಪತ್ತಿಯಲ್ಲಿ ಸ್ಖಾಲಿತ್ಯಗಳು ನುಸುಳಿ ರಸಾಭಾಸವಾಗುವುದುಂಟು. 

	ಭಾರತೀಯ ವಾದ್ಯಗಳಲ್ಲಿ ಅತ್ಯಂತ ಪುರಾತನವಾದುದು ವೀಣೆ, ಅದೇ ಭಾರತದೇಶಕ್ಕೆ ವಿಶಿಷ್ಟವಾದ ವಾದ್ಯವೆಂದರೂ ಒಪ್ಪೀತು. ಪ್ರಪಂಚದ ವಾದ್ಯಗಳಲ್ಲೇ ಇಷ್ಟು ಸೂಕ್ಷ್ಮವಾಗಿ, ಪ್ರಖರವಾಗಿ ಸ್ವರಗಳನ್ನು ಉತ್ಪಾದಿಸ ಬಲ್ಲ ವಾದ್ಯಗಳಿಲ್ಲವೆಂದು ಹೇಳುತ್ತಾರೆ. ವೈದಿಕ ವಾಙ್ಮಯದಲ್ಲಿ ಕೊಳಲು ಹೆಚ್ಚು ಪ್ರಚಲಿತವಾಗಿದ್ದಂತೆ ತೋರುವುದೆಂದು ಕೆಲವರ ವಾದ; ಅವರ ಪ್ರಕಾರ ಕೊಳಲೇ ಅತಿಪ್ರಾಚೀನ ವಾದ್ಯ. ದ್ರಾವಿಡ ಜನರು ತಂಬೂರಿಯನ್ನು ಬಳಸುತ್ತಿದ್ದರೆಂದೂ ಇದನ್ನು ಆರ್ಯರು ಗ್ರಹಿಸಿ ವೀಣೆಯನ್ನು ರಚಿಸಿದ ರೆಂದೂ ಒಂದು ವಾದವಿದೆ. ಇದು ಹೇಗಾದರೂ ಇರಲಿ, ತಂಬೂರಿಯೇನೋ ನಾಡಿನಾದ್ಯಂತ ಪ್ರಚಲಿತವಾದ ವಾದ್ಯವೇ. ಔತ್ತರೇಯ ಪದ್ಧತಿಯಲ್ಲಿ ಸೋರೆಬುರುಡೆಯಿಂದ ಮಾಡಿದ ತಂಬೂರವನ್ನೂ ದಾಕ್ಷಿಣಾತ್ಯರು ಹಲಸಿನ ಮರದಿಂದ ಕಡೆದು ಮಾಡಿದ ತಂಬೂರಿಯನ್ನು ಉಪಯೋಗಿಸುತ್ತಾರೆ. ತಂಬೂರಿಯ ರಚನೆಯೇ ವೀಣೆಯ ರಚನೆಗೆ ಆಧಾರವೆಂದೂ ನಂಬಬಹುದು.

	ವೀಣೆಯ ಉಲ್ಲೇಖವೇನೋ ವೇದಸಂಹಿತೆಗಳಲ್ಲಿಯೇ ಉಂಟು. ಋಗ್ವೇದ ಸಂಹಿತೆಯಲ್ಲಿ ಒಂದು ಕಡೆ ವೀಣೆ, ಮೃದಂಗ ಎರಡೂ ವಾದ್ಯಗಳ ಉಲ್ಲೇಖವಿದೆ. ಅನೇಕ ಬಗೆಯ ವೀಣೆಗಳ ರಾಚನಿಕ ವೈವಿಧ್ಯ ಮತ್ತು ಪ್ರಮಾಣ ವೈವಿಧ್ಯಗಳನ್ನು ವೈದಿಕವಾಙ್ಮಯ ಹೇಳುತ್ತದೆ. ಕ್ರಿಸ್ತಾಬ್ದ ಒಂದನೆಯ ಶತಮಾನದ ಸುಮಾರಿಗೇ ಕಚ್ಛವಿ, ಬ್ರಾಹ್ಮಿ, ವೈಷ್ಣವಿ, ಸಾರಸ್ವತ ಮುಂತಾದ ಹದಿನೆಂಟು ಬಗೆಯ ವೀಣೆಗಳು ನಮ್ಮಲ್ಲಿ ಬಳಕೆಯಲ್ಲಿದ್ದು ವೆಂದು ಸಂಗೀತಮಕರಂದವೆಂಬ ಗ್ರಂಥದಿಂದ ತಿಳಿದುಬರುತ್ತದೆ. ನಾಟ್ಯಶಾಸ್ತ್ರದ ಪ್ರವರ್ತಕನಾದ ಭರತಮುನಿ ಏಳುತಂತಿಗಳಿಂದ ಮಾಡಿದ ಚಿತ್ರವೀಣೆ ಎಂಬ ನಖವಾದ್ಯವನ್ನೂ ಒಂಬತ್ತು ತಂತಿಗಳನ್ನು ಅಳವಡಿಸಿ ಮಾಡಿದ ವಿಪಂಚಿ ಎಂಬ ಮೀಟುಕಡ್ಡಿ ವಾದ್ಯವನ್ನೂ ಪ್ರಸ್ತಾವಿಸುತ್ತಾನೆ. ವೀಣೆ ಆ ಕಾಲಕ್ಕೆ ವಿಶಿಷ್ಟವಾದ ವಾದ್ಯವಾಗಿತ್ತು. 

	ಇಂದು ದಕ್ಷಿಣದೇಶದಲ್ಲಿ ಪ್ರಚಲಿತವಾಗಿರುವ ವೀಣೆಯನ್ನು ಸಾರಸ್ವತವೀಣೆಯೆಂದು ವ್ಯವಹರಿಸುತ್ತಾರೆ. ಇದರ ರಚನೆಯಲ್ಲಿ ಕುಂಭ (ಕೊಡ), ದಂಡಿ(ದಂಡಿಗೆ), ಪಾದ(ಊರುಬುರುಡೆ) ಮತ್ತು ಯಾಳೀಮುಖ ವೆಂಬ ಅಂಗಗಳು ಇವೆ. ದಂಡಿಯೆನಿಸಿಕೊಳ್ಳುವ ಮರದ ದೋಣಿಯ ಮೇಲಿನ ಪಟ್ಟಿಯಲ್ಲಿ ಇಪ್ಪತ್ನಾಲ್ಕು ಮೆಟ್ಟಿಲುಗಳನ್ನು (ಲೋಹದ ಕಂಬಿಗಳನ್ನು) ಮೇಣ ಕಟ್ಟಡದ ಮೇಲೆ ಮೂಡಿಸಿ, ಅವುಗಳ ಮೇಲೆ ಹಾದುಹೋಗುವಂತೆ ಸಾರಣಿ ಪಂಚಮ, ಮಂದ್ರ, ಅನುಮಂದ್ರ ಎಂಬ ನಾಲ್ಕು ಸ್ವರತಂತಿಗಳನ್ನು ಕಟ್ಟುತ್ತಾರೆ. ಇವುಗಳಲ್ಲಿ ಸಾರಣಿ ಮತ್ತು ಪಂಚಮ ಎರಡೂ ಉಕ್ಕಿನ ತಂತಿಗಳು; ಮಂದ್ರ ಮತ್ತು ಅನುಮಂದ್ರ ಹಿತ್ತಾಳೆಯವು. ಕುದುರೆಯೆನಿಸಿಕೊಳ್ಳುವ ಭಾಗದ ಪಕ್ಕದಿಂದ ಮೂರು ತಾಳದ ತಂತಿಗಳನ್ನೂ ಕಟ್ಟುತ್ತಾರೆ. ಈ ಏಳುತಂತಿಗಳೂ ಯಾಭೀಮುಖದ ಬಳಿಯಿಂದ ಹೊರಟು ಮೇಲ್ಭಾಗದ ನಾಗಪಾಶ ಎಂಬೆಡೆ ಬದ್ಧವಾಗಿರು ತ್ತವೆ. ವೀಣೆಯ ವೈಶಿಷ್ಟ್ಯವೆಂದರೆ ಮೂರೂ ಸ್ಥಾಯಿಗಳಲ್ಲಿ (ಒಂದು ಸ್ಥಾಯಿಯಲ್ಲಿ ಹನ್ನೆರಡು ಸ್ವರಸ್ಥಾನಗಳು ಇವೆ) ನುಡಿಸುವ ಸೌಲಭ್ಯವಿದೆ. ಈ ಕಾರಣದಿಂದಲೇ ವೀಣೆಗೆ ತ್ರಿಸ್ಥಾಯಿಯೆಂಬ ಹೆಸರು ಬಳಕೆಯಲ್ಲಿತ್ತು. ವೀಣೆಯಲ್ಲಿಯೂ ಅದರ ಪ್ರಭೇದವಾದ ಗೊಟ್ಟುವಾದ್ಯದಲ್ಲಿಯೂ ಎರಡು, ಮೂರು ಸ್ವರಗಳನ್ನು ಒಟ್ಟಿಗೆ ಉತ್ಪತ್ತಿ ಮಾಡುವುದು ಸಾಧ್ಯ. ವೀಣೆಗಳಲ್ಲಿ ಶ್ರುತ್ಯಂತರನಾದಗಳನ್ನೂ ಸುಲಭವಾಗಿ ಮತ್ತು ನಿರ್ದಿಷ್ಟವಾಗಿ ಅನುರಣನ ಮಾಡಬಹುದು. 

	ಸಾರಸ್ವತವೀಣೆ ದಕ್ಷಿಣದೇಶದಲ್ಲೆಲ್ಲ ಪ್ರಚುರವಾಗಿದೆ. ಮೈಸೂರು ಈ ವಾದ್ಯಕ್ಕೆ ತುಂಬ ಹಿಂದಿನಿಂದ ಪ್ರಸಿದ್ಧವಾಗಿ ವೀಣೆಯ ಬೆಡಗಿದು ಮೈಸೂರು ಎಂಬ ಪ್ರಶಸ್ತಿಗೆ ಪಾತ್ರವಾಗಿದೆ. ಮೈಸೂರು ಸೀಮೆಯ ಹಲವಾರು ಹಳ್ಳಿಗಳಲ್ಲಿ ಕರಿಯ ಮರದಿಂದ ವೀಣೆಯ ಕುಂಭವನ್ನು ಅತ್ಯುತ್ತಮವಾಗಿ ಕಡೆಯುತ್ತಿದ್ದರು. ಚನ್ನಪಟ್ಟಣದಲ್ಲಿ ವೀಣೆಯ ತಂತಿಗಳನ್ನು ಮಾಡುವ ಪ್ರಾಚೀನ ಪ್ರಯೋಗವೊಂದು ಕಲೆಯಾಗಿತ್ತು. ತಮಿಳುನಾಡಿನ ತಂಜಾವೂರು ವೀಣೆ ಪ್ರಸಿದ್ಧವಾದುದು. ಸಾಮಾನ್ಯವಾಗಿ ಇದರ ಕುಂಭ ಹಲಸಿನಮರದ್ದು. ಆಂಧ್ರಪ್ರದೇಶದಲ್ಲಿ ವೀಣೆಯನ್ನು ನಮ್ಮಲ್ಲಿ ಅಡ್ಡ ಹಿಡಿದುಕೊಂಡು ನುಡಿಸುವಂತಲ್ಲದೆ, ಉದ್ದವಾಗಿ ನಿಲ್ಲಿಸಿಕೊಂಡು ನುಡಿಸುವ ಪದ್ಧತಿ ಇದೆ. ಇದಕ್ಕೆ ಊರ್ಧ್ವ ವೀಣೆಯೆಂದು ಹೆಸರು. 
	ಉತ್ತರ ಭಾರತದಲ್ಲಿ ಬಳಕೆಯಲ್ಲಿರುವ ರಬಬ್, ಸಿತಾರ್ ಮತ್ತು ಸಾರೋದ್ ಇವು ವೀಣೆಯ ಜಾತಿಗೇ ಸೇರಿದ ವಾದ್ಯಗಳು. ಮಹತೀವೀಣೆ ಯೆಂಬ ಪ್ರಾಚೀನವೀಣೆಯ ವರ್ತಮಾನ ರೂಪ ಹದಿನೆಂಟು ಮೆಟ್ಟಲುಗಳ ರುದ್ರವೀಣೆ. ರಬಬ್‍ವಾದ್ಯದ ಒಂದು ರೂಪಾಂತರ ಸುರ್‍ಸ್ಪಂಗಾರ್ ಎಂಬ ವಾದ್ಯ. ಇದನ್ನು ನುಡಿಸುತ್ತಿದ್ದರೆ ವೀಣೆಯ ನಾದ ಬಲುಮಟ್ಟಿಗೆ ಪ್ರತಿಧ್ವನಿತವಾದಂತೆ ಭಾಸವಾಗುತ್ತದೆ. ನಮ್ಮಲ್ಲಿಯ ಗೊಟ್ಟುವಾದ್ಯದಂತೆ ಉತ್ತರ ಭಾರತದಲ್ಲಿ ಸುರ್‍ಬೀನಾ ವಾದ್ಯವಿದೆ. ದಂಡಿಗೆಯ ಮೇಲೆ ಮೆಟ್ಟಲುಗಳಿಲ್ಲ. ಸಿತಾರ್ ಎಂಬುದು ವೀಣೆಯೇ ಆದರೂ ಪರ್ಷಿಯ ದೇಶದ ಊದ್ ಎಂಬ ವಾದ್ಯದ ಸ್ವರೂಪವನ್ನು ಅವಲಂಬಿಸಿ ನಿರ್ಮಿತ ವಾದದ್ದು. ಸಿತಾರ್‍ವಾದನದಲ್ಲಿ ಮಜೀದ್‍ಖಾನೀ ಮತ್ತು ರೆಸಾಖಾನೀ ಎಂಬ ಎರಡು ವಿವಿಕ್ತಪದ್ಧತಿಗಳಿವೆ. ವಾದನವೈವಿಧ್ಯದಿಂದ ಈ ಪದ್ಧತಿ ಭೇದ ಒದಗಿಬಂದಿದೆ. ಸಾರೋದ್ ವಾದ್ಯದಲ್ಲಿ ಪ್ರಧಾನವಾದ ತಂತಿಗಳು ನಾಲ್ಕೇ ಆದರೂ ವಾದ್ಯರಚನೆ ಮಾತ್ರ ಬೇರೆ. ಇದರ ರಚನೆಯಲ್ಲಿ ಲೋಹ ಮತ್ತು ಚರ್ಮ ಎರಡನ್ನೂ ಸೇರಿಸಿ ಮಾನವ ಶಾರೀರವನ್ನು ಅನುಕರಿಸುವ ಸೌಲಭ್ಯವಿದೆ. ಪ್ರಧಾನ ತಂತಿಗಳ ಅಡಿಭಾಗದಲ್ಲಿ ಧ್ವನಿ ಪೋಷಣೆಗೆ ಹನ್ನೆರಡು ಸಹಕಾರಿತಂತಿಗಳನ್ನು ಕಟ್ಟಿರುತ್ತಾರೆ. ಸಿತಾರ್ ಮತ್ತು ಸಾರೋದ್ ಎರಡೂ ವಾದ್ಯಗಳನ್ನು ಮೀಟುಕಡ್ಡಿಗಳಿಂದ ನುಡಿಸುತ್ತಾರೆ. 

	ದಕ್ಷಿಣ ಭಾರತದಲ್ಲಿ ವೀಣೆಯ ಬಳಿಕ ಅತಿಜನಪ್ರಿಯ ವಾದ್ಯ ಪಿಟೀಲು. ಇದು ಫಿಡ್ಲ್ ಎಂಬ ಆಂಗ್ಲಪದದ ಅಪಭ್ರಂಶ. ತಿರುಮಕೂಡಲು ನರಸೀಪುರದ ದೇವಾಲಯದಲ್ಲಿ ಪಿಟೀಲಿನಂಥದೆ ವಾದ್ಯದ ಶಿಲ್ಪ ನಿರೂಪಣೆ ಇದೆಯೆಂದು ಹೇಳುತ್ತಾರೆ. ಆದರೆ ಪಿಟೀಲು ನಮ್ಮ ದೇಶಕ್ಕೆ ಎರವಲು ಬಂದ ವಾದ್ಯವೆಂಬುದು ನಿರ್ವಿವಾದ. ಹೊರದೇಶಗಳಿಂದ (ಸು. 18ನೆಯ ಶತಮಾನದಲ್ಲಿ) ಸುಪ್ರಸಿದ್ಧ ವಾಗ್ಗೇಯಕಾರರೂ ಕರ್ನಾಟಕ ಸಂಗೀತದ ತ್ರಿಮೂರ್ತಿಗಳಲ್ಲಿ ಒಬ್ಬರೂ ಎಂದು ಹೆಸರಾಂತ ಮುತ್ತುಸ್ವಾಮಿ ದೀಕ್ಷಿತರ ತಮ್ಮ ಬಾಲುಸ್ವಾಮಿ ದೀಕ್ಷಿತರು (ರಾಮಸ್ವಾಮಿ ದೀಕ್ಷಿತರ ಮಗ) ಈ ವಾದ್ಯವನ್ನು ಅಭ್ಯಾಸಮಾಡಿ ಪ್ರೌಢಿಮೆ ಗಳಿಸಿ, ಇದನ್ನು ನಮ್ಮ ಸಂಗೀತಪದ್ಧತಿಗೆ ಅಳವಡಿಸಿಕೊಂಡರು. ಅಲ್ಲಿಂದ ಮುಂದೆ ಇದು ನಮ್ಮದೇ ಆದ ವಾದ್ಯವಾಗಿ ನಿಂತಿದೆ. ತಿರುಕ್ಕೋಡಿಕಾವಲ್ ಕೃಷ್ಣಯ್ಯರ್ ಅವರು ಈ ವಾದ್ಯವನ್ನು ನಮ್ಮ ಪದ್ಧತಿಗನುಸಾರವಾಗಿ ಪರಷ್ಕರಿಸಿದರು. ವಾದ್ಯದ ರಚನೆಯೇನೋ ಪಾಶ್ಚಾತ್ಯ ಪದ್ಧತಿಯದು; ಆದರೆ ಶ್ರುತಿವಿಧಾನ ಕರ್ಣಾಟಕ ಸಂಗೀತ ಪದ್ಧತಿಯ ಆಯಕಟ್ಟಿನಲ್ಲಿಯೇ ಇದೆ. ಮೈಸೂರು ಟಿ.ಚೌಡಯ್ಯನವರು ಪಿಟೀಲಿನ ತಂತಿಗಳ ಸಂಖ್ಯೆಯನ್ನು 7ಕ್ಕೆ ಹೆಚ್ಚಿಸಿ ನಾದಸೌಕರ್ಯ ಹೆಚ್ಚುವಂತೆ ಮಾಡಿ ಸುಧಾರಿಸಿದ್ದಾರೆ. 19 ತಂತಿಗಳ ಪಿಟೀಲನ್ನೂ ಇವರು ರಚಿಸಿದ್ದರು. ಇದರಲ್ಲಿ 7 ವಾದನ ತಂತಿಗಳು, 12 ಅನುನಾದ ತಂತಿಗಳು. 

	ದಕ್ಷಿಣ ಭಾರತದಲ್ಲಿಯ ಪಿಟೀಲಿನಂತೆ ಉತ್ತರಭಾರತದಲ್ಲಿ ಸಾರಂಗಿ ಯೆಂಬುದು ಒಂದು ಧನುರ್ವಾದ್ಯ. ಪಿಟೀಲಿನಂತೆ ಇದೂ ಸಾಮಾನ್ಯವಾಗಿ ಪಕ್ಕವಾದ್ಯವೇ. ಸಾರಂಗಿಯ ಒಂದು ಪ್ರಭೇದ ಎಸ್ರಾಜ್. ಮುಸ್ಲಿಮ್ ಮಹಿಳೆಯರು ಇದನ್ನು ಬಳಕೆಗೆ ತಂದರೆಂದು ಪ್ರತೀತಿ. ದಿಲ್ರೂಬ ಎಂಬುದು ಮುಸ್ಲಿಮರ ಸಾರಂಗಿಯನ್ನು ತಮ್ಮ ಗಾನಪದ್ಧತಿಗೆ ಅಳವಡಿಸಿ ಕೊಂಡ ವಾದ್ಯವಿಶೇಷ. ಸಾರಂಗಿಯನ್ನು ನುಡಿಸುವವರು ಸಾಮಾನ್ಯವಾಗಿ ಗಂಡಸರು, ಅದರ ವಾದನ ಕಷ್ಟಸಾಧ್ಯವಾದುದು. 

	ಕೊಳಲು ಪ್ರಪಂಚದಲ್ಲಿಯೇ ಅತಿಪ್ರಾಚೀನ ವಾದ್ಯ. ಮೊದಲು ಕೊಳಗಳಲ್ಲಿ ಬೆಳೆಯುವ ಒಂದು ಬಗೆಯ ಜೊಂಡುಕಡ್ಡಿಗಳನ್ನು ಕೊರೆದು ಈ ವಾದ್ಯಗಳನ್ನು ಮಾಡುತ್ತಿದ್ದರು. ಸುಲಭ ಮತ್ತು ಸರಳ ವಾದ್ಯವಾದರೂ ಇದರಷ್ಟು ಇಂಪಾದ ವಾದ್ಯ ಮತ್ತೊಂದಿಲ್ಲ. ಜೊಂಡುಕಡ್ಡಿಗಳಿಗಿಂತ ಹೆಚ್ಚಾಗಿ ಬಿದಿರುಕಡ್ಡಿಗಳಿಂದ ಈ ವಾದ್ಯವನ್ನು ಈಗ ತಯಾರಿಸುತ್ತಾರೆ. ಸಂಸ್ಕøತದಲ್ಲಿ ವೇಣು ಅಥವಾ ವಂಶ ಎಂದರೆ ಬಿದಿರು. ಉತ್ತರದೇಶದಲ್ಲಿ ಕೊಳಲಿಗೆ ಬಾನ್ಸುರಿ ಎಂದು ಹೆಸರು. ಇದು ವಂಶ ಪದದ ಅಪಭ್ರಂಶ.
	ನಾದಸ್ವರ ಅಥವಾ ನಾಗಸ್ವರ ಕೊಳಲಿನಂತೆಯೇ ಸುಷಿರಜಾತಿಗೆ ಸೇರಿದ ವಾದ್ಯ. ಆದರೆ ಇದರ ರಚನೆ ಕೊಳಲಿನಷ್ಟು ಸುಲಭವಲ್ಲ. ಮರದ ಕೊಳವೆಯಲ್ಲಿ ಹನ್ನೆರಡು ರಂಧ್ರಗಳನ್ನು ಕೊರೆದು ಮಾಡುವ ಈ ವಾದ್ಯವನ್ನು ಜೀವಾಳದ ಮೂಲಕ ಊದುತ್ತಾರೆ. ನಾದಸ್ವರ ಮಂಗಳವಾದ್ಯವೆಂದು ಪ್ರಸಿದ್ಧವಾಗಿದೆ. ಯಾವ ಉತ್ಸವವಾಗಲಿ ಯಾವ ಮಂಗಳಕಾರ್ಯವೇ ಆಗಲಿ ಈ ವಾದ್ಯವಿಲ್ಲದೆ ನಡೆಯುವುದಿಲ್ಲ. ರಥೋತ್ಸವ ಮುಂತಾದ ಸಂದರ್ಭಗಳಲ್ಲಿ ದೇವರ ಮುಂದೆ ನಾದಸ್ವರ ಗೋಷ್ಠಿಯವರು ಸಂಗೀತದ ಪ್ರವಾಹವನ್ನೇ ಹರಿಸುತ್ತಾರೆ. ಎಷ್ಟೊ ಕಡೆ ಇಡೀ ರಾತ್ರಿಯೆಲ್ಲ ಇವರ ಗಾನಕ್ರಿಯೆ ನಡೆಯುತ್ತದೆ.

	ಕೊಳಲಿನ ಗೋತ್ರಕ್ಕೆ ಸೇರಿದ ಇನ್ನೊಂದು ವಾದ್ಯ ವಿಶೇಷ ಶೆಣಾಯ್ ಅಥವಾ ಶಹನಾಯ್. ಇದರ ರಚನೆಯಲ್ಲಿಯೂ ಟೊಳ್ಳುಕೊಳವೆಯೇ ಮುಖ್ಯ ಅಂಗ. ಆದರೆ ಇದರಲ್ಲಿರುವ ವಿವರಗಳು  (ರಂಧ್ರಗಳು) 7. ಇದರ ಬಳಕೆ ಉತ್ತರಭಾರತದಲ್ಲಿ ಹೆಚ್ಚು. ಈಗೀಗ ಪ್ರಚಾರಕ್ಕೆ ಬರುತ್ತಿರುವ ಕ್ಲೇರಿಯೋನೆಟ್ ಎಂಬುದು ಕೂಡ ಸುಷಿರವಾದ್ಯವೇ. ಇದು ಹೊರಗಿನಿಂದ ಬಂದಿರುವ ವಾದ್ಯವಿಶೇಷ. ಇದನ್ನು ಸಾಮಾನ್ಯವಾಗಿ ಆರ್ಕೆಸ್ಟ್ರಾಗಳಲ್ಲಿ (ಗೋಷ್ಠಿಗಾನ, ವಾದ್ಯವೃಂದ) ಉಪಯೋಗಿಸುತ್ತಾರೆ. 

	ಪಕ್ಕವಾದ್ಯಗಳಲ್ಲೆ ಶ್ರೇಷ್ಠವಾದುದು ಮೃದಂಗ. ರಚನೆಗೆ ಸರಳ, ನಿರ್ವಹಣೆಗೆ ಗಹನ. ಈಗ ಘಟವನ್ನು ತಯಾರಿಸುವಂತೆ ಮೊದಲಿಗೆ ಇದನ್ನೂ ಮಣ್ಣಿನಲ್ಲಿಯೇ ಮಾಡುತ್ತಿದ್ದರಾಗಿ ಇದಕ್ಕೆ ಮೃತ್+ಅಂಗ = ಮೃದಂಗ ಎಂಬ ಹೆಸರಾಯಿತು. ಈಗಿನ ಮೃದಂಗದ ಮೈ ಮರದ್ದು; ಪೀಪಾಯಿಯಂತೆ ಡೊಳ್ಳು ಟೊಳ್ಳು ಇದ್ದು ಇಕ್ಕೆಲಗಳಲ್ಲಿಯೂ ಚರ್ಮದ ಪದರದಿಂದ ಬಾಯಿ ಮುಚ್ಚಿ ಬಿಗಿದು ಕಟ್ಟಿರುತ್ತಾರೆ. ನುಡಿಸುವಾಗ ಅಂಗೈಯಿಂದ ಉಜ್ಜಿ ತಿಕ್ಕಿ, ಬೆರಳುಗಳಿಂದ ಬಡಿದು ಚಮತ್ಕಾರವನ್ನು ತೋರಿಸುತ್ತಾರೆ. ಕರ್ಣಾಟಕ ಸಂಗೀತ ಬೈಠಕ್ಕುಗಳಲ್ಲಿ ಮೃದಂಗ ಅವಶ್ಯವಾದ ಪಕ್ಕವಾದ್ಯ. ವೀಣೆಗೂ ಮೃದಂಗದ ಸಹಕಾರವಿದ್ದರೆ ಸೊಗಸು. ಉತ್ತರ ಭಾರತದಲ್ಲಿ ಪಕ್‍ವಾಜ್ (ಪಕ್ಕವಾದ್ಯ) ಎಂಬುದು ಮೃದಂಗದ ರೂಪಾಂತರವೇ. ಆದರೆ ಈ ಪದಕ್ಕೆ ಅವರು ಶುದ್ಧಶಬ್ದ (ಪಕ್ಕಅವಾಜ್) ಎಂದು ಅರ್ಥಮಾಡುತ್ತಾರೆ. ತಾಳ ವಾದ್ಯಗಳಲ್ಲೆಲ್ಲ ಪ್ರಮುಖವಾದುದು ಮೃದಂಗ. ಇದನ್ನು ನಾಟ್ಯಕ್ಕೂ ಬಲುಮಟ್ಟಿಗೆ ಅಳವಡಿಸಿಕೊಂಡಿದ್ದಾರೆ. ಕರ್ನಾಟಕದ ಜನಪದ ನೃತ್ಯಗೀತಗಳಲ್ಲಿ ಇದಕ್ಕೆ ಹತ್ತಿರದ ಸಂಬಂಧಿಯಾದ ಮದ್ದಲೆಯ ಪ್ರಯೋಗ ಹೆಚ್ಚು. ಯಕ್ಷಗಾನ ಬಯಲಾಟಗಳಿಗೆ ದಕ್ಷಿಣ ಕನ್ನಡ ಜಿಲ್ಲೆಯ ಕಡೆ ತಾಳಮದ್ದಲೆಯೆಂಬ ಹೆಸರು ಬಳಕೆಯಲ್ಲಿದೆ.

	ಮೃದಂಗದಂತೆಯೇ ಇರುವ ಇನ್ನೊಂದು ಲಯವಾದ್ಯ ಢೋಲಕ್. ಇದು ದ್ವಿಮುಖವಾಗಿದ್ದು ಒಂದು ಮುಖವನ್ನು ಕಡ್ಡಿಯಿಂದ ನುಡಿಸುತ್ತಾರೆ. ಮೃದಂಗವನ್ನು ಇಬ್ಭಾಗವಾಗಿ ಪ್ರತ್ಯೇಕಿಸಿ ತಬಲವನ್ನು ಮಾಡಿದ್ದಾರೆ. ಈ ಎರಡು ಭಾಗಗಳನ್ನು ಬೇರೆಬೇರೆ ಮಾಡಿ ಚರ್ಮದ ಮುಖವನ್ನು ಮೇಲೆಮಾಡಿಬಿಟ್ಟರೆ ತಬಲವಾಗುವುದು. ನಿಜವಾಗಿ ತಬಲ ಎಂಬುದು ಎರಡು ವಾದ್ಯಗಳು. ಒಂದೊಂದು ಕೈಯಿಂದ ಒಂದೊಂದು ವಾದ್ಯವನ್ನು ನುಡಿಸುತ್ತಾರೆ. ಹಿಂದೆ ಇದು ಅರೇಬಿಯಾ ದೇಶದಲ್ಲಿ ಪ್ರಚುರವಾಗಿತ್ತಂತೆ. ಅಲ್ಲಿಯ ಜುಬಲ್ ಎಂಬ ಸಂಗೀತಗಾರನ ಮಗ ತುಬಲ್ ಎಂಬಾತ ಈ ವಾದ್ಯವಿಶೇಷವನ್ನು ನಿರ್ಮಿಸಿದನಾಗಿ ಇದು ತಬಲ ಎಂದಾಯಿತಂತೆ. ತಬಲವಾದನದಲ್ಲಿ ಬನಾರಸ್ ಪದ್ಧತಿ, ಲಕ್ನೋಪದ್ಧತಿ, ಷರೂಕಾಬಾದ್ ಪದ್ಧತಿ, ಪಂಜಾಬ್ ಪದ್ಧತಿ, ಅಜರ್ದಾ ಪದ್ಧತಿ ಎಂಬ ಪ್ರಭೇದಗಳುಂಟು.

	ಭಾರತದಲ್ಲಿ ಶುದ್ಧಸಂಗೀತಕ್ಕೆ ಅಳವಡಿಸಿಕೊಂಡ ವಾದ್ಯಗಳಲ್ಲದೆ ದೇವಸ್ಥಾನದಲ್ಲಿ ಪೂಜಾಕ್ರಮಕ್ಕೆ ಶಂಖ, ಜಾಗಟೆ, ತಮ್ಮಟೆ, ತಾಳ ಮುಂತಾದವೂ ಯುದ್ಧಾದಿ ಸಂದರ್ಭಗಳಲ್ಲಿ ಬೆüೀರಿ, ಪಣವ, ಗೋಮುಖ, ದುಂದುಭಿ, ಕೊಂಬು, ಕಹಳೆ, ಢಕ್ಕೆ ಮುಂತಾದವೂ ವ್ಯವಹಾರದಲ್ಲಿದ್ದುವು. ಇವಲ್ಲದೆ ಕಿನ್ನರಿ ಎಂಬ ವಾದ್ಯವೂ ಏಕತಾರವೆಂಬ ಒಂದೇ ತಂತಿಯ ತಂಬೂರಿಯೂ ಪ್ರಚಾರದಲ್ಲಿದ್ದುವು. ಊರೂರು ತಿರುಗಿ ಹಾಡುತ್ತ ಹೊಟ್ಟೆಹೊರೆಯುತ್ತಿದ್ದ ಕುಶೀಲವರು ತುಂತಿಣವೆಂಬ ವಾದ್ಯವಿಶೇಷವನ್ನು ನುಡಿಸಿಕೊಂಡು ಹೋಗುತ್ತಿದ್ದರು. ಕಣಿಹೇಳಿ ಜೀವನ ಮಾಡುತ್ತಿದ್ದ ಜನ ಬುಡುಬುಡುಕೆ ಸದ್ದುಮಾಡುತ್ತ ಹಾಡುತ್ತಿದ್ದರು. ಇವರಿಗೆ ಬುಡುಬುಡಿಕೆಯವರೆಂದೇ ಹೆಸರು ಬಂದಿತು. ಹಳ್ಳಿಯ ಕಡೆ, ಮಠಗಳಲ್ಲಿ, ಗುಡಿಗಳಲ್ಲಿ ಡೋಲು ಢಕ್ಕೆಗಳ ಉಪಯೋಗ ವಿಶೇಷವಾಗಿತ್ತು. ಊಂಛವೃತ್ತಿಯಿಂದ ಬದುಕುತ್ತಿದ್ದ ಹರಿದಾಸರು ದಂಡಿಗೆ ಬೆತ್ತವೆಂಬ ಸರಳವಾದ ತಂತೀವಾದ್ಯವನ್ನು ನುಡಿಸುತ್ತ ಚಿಟಿಕೆತಾಳ ಹಾಕಿ ಹಾಡುತ್ತಿದ್ದರು. ಕೀರ್ತನಕಾಲಕ್ಷೇಪಗಳಲ್ಲಿ ತಾಳವೇ ಮುಖ್ಯವಾದ ವಾದ್ಯವಾಗಿತ್ತು. ಶಂಖಕ್ಕೆ ಕೊಳವಿಯನ್ನು ಸೇರಿಸಿ ಊದುವ ಪರಿಪಾಠವೂ ಇತ್ತು. ಹಲವಾರು ವಾದ್ಯಗಳ ಆಕೃತಿಗಳನ್ನು ಬೇಲೂರು ಶಿಲ್ಪಗಳಲ್ಲಿಯೂ ಅಮರಾವತೀ ಸ್ತೂಪಶಿಲ್ಪಗಳಲ್ಲಿಯೂ ಮಧುರೆ, ತಂಜಾವೂರು, ಚಿದಂಬರ ದೇವಾಲಯಗಳಲ್ಲಿಯೂ ಕಾಣಬಹುದು.				
	(ಜೆ.ಆರ್.ಎಮ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ